Sunday, January 15, 2017

Kannada Prajavani review: An era of darkness--Shashi Tharoor

My short review of "An era of darkness" in Prajavani 

http://www.prajavani.net/news/books/2017/01/14/465868.html

ಕತ್ತಲೆ ಯುಗದ ಮೇಲೆ ಬೆಳಕು ಚೆಲ್ಲಿದ ಶಶಿ ತರೂರ





An era of darkness: The British Empire in India

Shivanand Kanavi

ತಿರುವನಂತಪುರದಿಂದ  ಕಾಂಗ್ರೆಸ್ ಸಂಸದರಾದ ಶಶಿ ತರೂರ ಒಬ್ಬ ರಾಜಕಾರಣಿಯಾಗುವ ಮುನ್ನ ಒಳ್ಳೆಯ ವಾಗ್ಮಿ ಮತ್ತು ಲೇಖಕರೂ ಆಗಿದ್ದರು. ಈವರೆಗೆ ನಾಲ್ಕು ಕಾದಂಬರಿಗಳು ಸೇರಿದಂತೆ ಹದಿನಾರು ಕೃತಿಗಳನ್ನು ಅವರು ರಚಿಸಿದ್ದಾರೆ.
ಲೋಕಸಭೆಯಲ್ಲಿ, ಸಾರ್ವಜನಿಕ ಸಭೆ–ಸೆಮಿನಾರುಗಳಲ್ಲಿ, ವಾಹಿನಿಗಳಲ್ಲಿ ಅಭ್ಯಾಸಪೂರ್ಣವಾಗಿ, ತರ್ಕಬದ್ಧವಾಗಿ, ವಿನಯಶೀಲರಾಗಿ, ಹಸನ್ಮುಖರಾಗಿ ಮಾತನಾಡುವ ಕೆಲವೇ ಕೆಲವು ಸುಸಂಸ್ಕೃತರಲ್ಲಿ ತರೂರ ಒಬ್ಬರು.
ಮೇ 2015ರಲ್ಲಿ ಅವರನ್ನು ‘ಬ್ರಿಟನ್ ತನ್ನ ಹಳೆಯ ವಸಾಹತುಗಳಿಗೆ ಪ್ರಾಯಶ್ಚಿತ್ತ ಧನವನ್ನು ಕೊಡಬೇಕು’ ಎಂಬ ವಿಷಯವನ್ನು ಪ್ರತಿಪಾದಿಸಲು ಸುಪ್ರಸಿದ್ಧ ಆಕ್ಸ್‌ಫರ್ಡ್ ಯೂನಿಯನ್ ಆಹ್ವಾನಿಸಿತ್ತು.
ಅವರು ಮಾಡಿದ 15 ನಿಮಿಷದ ಭಾಷಣ ಎಲ್ಲರ ಮೆಚ್ಚುಗೆ ಗಳಿಸಿತು. ಅಷ್ಟೇ ಅಲ್ಲ, ಅದು ಅಂತರ್ಜಾಲದ ‘ಯುಟ್ಯೂಬ್’ನಲ್ಲಿ ಅವತರಿಸಿದಾಗ, 36 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಿತು. ಪ್ರಧಾನಿ ನರೇಂದ್ರ ಮೋದಿಯವರೂ ತರೂರರನ್ನು ಅಭಿನಂದಿಸಿದರು. ಆಗ ಪ್ರಕಾಶಕ ಡೇವಿಡ್ ದವಿಡಾರ್ ಈ ವಿಷಯದ ಬಗ್ಗೆ ಒಂದು ಪುಸ್ತಕವನ್ನು ಬರೆಯಲು ತರೂರರನ್ನು ಪ್ರೇರೇಪಿಸಿದರು. ಇದರ ಫ಼ಲ ಇತ್ತೀಚೆಗೆ ‘ಅಲೆಫ್‌ ಬುಕ್ ಕಂಪನಿ’ ಪ್ರಕಟಿಸಿದ ತರೂರರ ಗ್ರಂಥ, An era of darkness: The British Empire in India (ಕಪ್ಪು ಕತ್ತಲೆಯ ಯುಗ: ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ). ಈಗಾಗಲೇ ‘ಬೆಂಗಳೂರು ಲಿಟರರಿ ಫೆಸ್ಟಿವಲ್’ ಒಳಗೊಂಡು ಅನೇಕ ಕಡೆಗಳಲ್ಲಿ ಈ ಪುಸ್ತಕ ಚರ್ಚಿತವಾಗಿದೆ. ಮತ್ತು ವಿವಿಧ ಮಾಧ್ಯಮಗಳಲ್ಲಿ ಲೇಖಕ ತರೂರರ ಸಂದರ್ಶನಗಳು ಪ್ರಕಟವಾಗಿವೆ.
18–19ನೇ ಶತಮಾನದ ವಸಾಹತುವಾದ ಒಳ್ಳೆಯದೋ ಕೆಟ್ಟದ್ದೋ ಎಂದು ವಾದ ವಿವಾದ ಇದುವರೆಗೂ ಬ್ರಿಟನ್‌ನಲ್ಲಿ ನಡೆದು ಬಂದಿದೆ ಮತ್ತದರ ಪರಿಣಾಮ ಅಲ್ಲಿ ಕಲಿಯುವ ಮಕ್ಕಳ ಶಾಲಾಪಠ್ಯಗಳಲ್ಲೂ ಕಂಡು ಬಂದಿದೆ, ಎಂದರೆ ಅದಕ್ಕೆ ತುತ್ತಾದ ಭಾರತೀಯರಿಗೆ ಇದೊಂದು ಕ್ರೂರ ಹಾಸ್ಯವಾಗಿ ಕಂಡುಬರಬಹುದು. ಶಶಿ ತರೂರರ ಪುಸ್ತಕ ಬ್ರಿಟಿಷ್ ಸಾಮ್ರಾಜ್ಯವಾದವು ಸರ್ವತೋಪರಿಯಾಗಿ ಭಾರತದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ತುಂಬಲಾರದ ಹಾನಿಯನ್ನು ಉಂಟು ಮಾಡಿತು ಎಂದು ಅನೇಕ ಪ್ರಮಾಣಗಳೊಂದಿಗೆ ಸಿದ್ಧಪಡಿಸುತ್ತದೆ. ಪುಸ್ತಕದ ಕೊನೆಯಲ್ಲಿರುವ ಸಂದರ್ಭ ಗ್ರಂಥಗಳ ಸಂಖ್ಯೆಯೇ ಸುಮಾರು ಮುನ್ನೂರಿದೆ.
ಇದುವರೆಗೆ ಬ್ರಿಟನ್‌ನಲ್ಲಿ ಅಷ್ಟೇ ಅಲ್ಲ, ಭಾರತದಲ್ಲೂ ಹಲವು ಜನರು ಬ್ರಿಟಿಷ್ ವಸಾಹತುವಾದದ ಕೊಡುಗೆಗಳ ಪಟ್ಟಿಯನ್ನು ಮಾಡುತ್ತಾರೆ. ಉದಾಹರಣೆಗೆ: ಸುರಾಜ್ಯ, ಆಧುನಿಕ ನ್ಯಾಯಾಂಗ, ರೇಲ್ವೆ, ಹಿಂದೂ ಸಮಾಜೋದ್ಧಾರ, ಕ್ರಿಕೆಟ್, ಚಹಾ, ಆಧುನಿಕ ಮಾರ್ಕೆಟ್ ವ್ಯವಸ್ಥೆ, ಇದಲ್ಲದೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ ಇವೆಲ್ಲ ಈ ಪಟ್ಟಿಯಲ್ಲಿ ಸೇರಿವೆ. ಆದರೆ ತರೂರ ಮಾತ್ರ ನಿಷ್ಠುರವಾಗಿ, ಪ್ರಮಾಣಸಹಿತವಾಗಿ ಇವುಗಳನ್ನೆಲ್ಲ ಈ ಪುಸ್ತಕದಲ್ಲಿ ಖಂಡಿಸುತ್ತಾರೆ.
ತರೂರರು ಮಂಡಿಸುವ ಹಲವಾರು ವಿಷಯಗಳು ವಸಾಹತುವಾದದ ಅಭ್ಯಾಸಿಗಳು ಗಂಭೀರವಾಗಿ ಚಿಂತಿಸಲು ಅರ್ಹವಾಗಿವೆ. ಅವುಗಳೆಂದರೆ: 
1. ಬ್ರಿಟಿಷ್ ಪೂರ್ವ ಭಾರತದಲ್ಲಿ ರಾಜ ಬೊಕ್ಕಸ ವ್ಯಾಪಾರದ ಕರಗಳ ಮೇಲೆ ಹೆಚ್ಚು ಅವಲಂಬಿಸಿತ್ತು. ಆದರೆ ಸ್ವತಃ ವ್ಯಾಪಾರಿಗಳಾಗಿ ಬಂದ ಅವರು ಅದನ್ನು ಬದಲಿಸಿ, ರಾಜ ಬೊಕ್ಕಸದ ಭಾರವನ್ನು ಭೂಕಂದಾಯ ಮತ್ತು ಕೃಷಿಯ ಮೇಲೆಯೇ ಹೊರಿಸಿದರು (ಅದಕ್ಕಾಗಿಯೇ ಯಾವುದೇ ಮುಚ್ಚುಮರೆ ಇಲ್ಲದೆ ಅವರು ಜಿಲ್ಲಾಧಿಕಾರಿಗಳಿಗೆ ಮಾಫಿಯಾ ಶೈಲಿಯಲ್ಲಿ ‘ಕಲೆಕ್ಟರ್’ ಎಂದು ಕರೆದರು). ಪರಿಣಾಮವಾಗಿ ರೈತಾಪಿ ಜನ ಅಸಂಖ್ಯ ಕಷ್ಟಗಳನ್ನು ಅನುಭವಿಸಬೇಕಾಯಿತು. ಇದರ ಜೊತೆಗೆ ಗ್ರಾಮೋದ್ಯೋಗ ಮತ್ತು ಕೈಗಾರಿಕೆಗಳನ್ನು ನಾಶಗೊಳಿಸಿದ್ದರಿಂದ ಅಸಂಖ್ಯ ಭೂಹೀನ ರೈತರ ಮತ್ತು ಪದೇ ಪದೇ ಮಾನವ ನಿರ್ಮಿತ ಕ್ಷಾಮಗಳ ನಿರ್ಮಾಣವಾಯಿತು.
2. ಭ್ರಷ್ಟಾಚಾರ ಮತ್ತು ಅದರ ನಿರ್ಮೂಲನೆ ಈಗ ಬಹು ಚರ್ಚಿತ ವಿಷಯವಾದಾಗ ತರೂರ್ ‘ಈಸ್ಟ್‌ ಇಂಡಿಯಾ ಕಂಪನಿ’ ಮತ್ತದರ ಅಧಿಕಾರಿಗಳು ಅಭೂತಪೂರ್ವ ಭ್ರಷ್ಟಾಚಾರವನ್ನು ಭಾರತಕ್ಕೆ ಹೇಗೆ ತಂದರು ಎಂದು ಸಪ್ರಮಾಣ ವಿವರಿಸುತ್ತಾರೆ.
3. ನಾವು ತಿರಸ್ಕರಿಸುವ ವಿಲಾಸಿ, ಲಂಪಟ, ಐಶ್ವರ್ಯಲೋಲುಪ ನವಾಬರು, ನಿಜಾಮರು, ಮಹಾರಾಜರು ಅವರೊಡನೆಯೇ ರಾಯಬಹಾದ್ದೂರ ಮತ್ತು ದಿವಾನ್ ಬಹದ್ದೂರರು ಹೇಗೆ ಉದ್ಭವಿಸಿದರು.
4. ಬ್ರಿಟಿಷರು ಮೊದಲಿನಿಂದಲೂ ಮತ್ತು ವಿಶೇಷವಾಗಿ 1857ರ ಸ್ವಾತಂತ್ರ ಸಮರದ ನಂತರ ಹಿಂದೂ–ಮುಸ್ಲಿಂ ಕೋಮುವಾದ ಮತ್ತು ಜಾತಿಭೇದವನ್ನು ತಮ್ಮ ಒಡೆದು ಆಳುವ ನೀತಿಯ ಮೂಲಕ ಹೇಗೆ ಬೆಳೆಸಿದರು ಎಂಬುದನ್ನೂ ವಿವರಿಸುತ್ತಾರೆ.
ಈ ಪುಸ್ತಕದ ಒಂದು ಕೊರತೆಯೆಂದರೆ, ಆಗೀಗ ಅನವಶ್ಯಕವಾಗಿ ಮಾರ್ಕ್ಸ್, ಸ್ಟಾಲಿನ್ ಇತ್ಯಾದಿಯವರನ್ನು ತೆಗಳುವುದು. ಇದು ಬಹುಶಃ ಕೇರಳದ ತರೂರರ ಮತಕ್ಷೇತ್ರಕ್ಕೆ ಸಂಬಂಧಿಸಿದ ರಾಜಕಾರಣಕ್ಕಾಗಿ ಇರಬಹುದು. ಇನ್ನೊಂದು ಕೊರತೆ ಎಂದರೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಉಜ್ವಲ ಅಂಗವಾದ ಗದರ್ ಕ್ರಾಂತಿಕಾರರು, ಭಗತ್ ಸಿಂಗ್ ಮತ್ತವರ ಸಂಗಾತಿಗಳು, ಅಷ್ಟೇ ಅಲ್ಲದೆ 1857ರ ಸ್ವಾತಂತ್ರ್ಯ ಸಮರ, ಇವೆಲ್ಲವನ್ನೂ ಹತ್ತಿಕ್ಕುವಾಗ ಬ್ರಿಟಿಷರು ಉಪಯೋಗಿಸಿದ ಮೋಸ, ಕ್ರೌರ್ಯ ಇತ್ಯಾದಿಗಳನ್ನು ಕಡೆಗಣಿಸಿರುವುದು.
ಒಟ್ಟಾರೆ ‘ವಿಶ್ವವೊಂದೇ ಹಳ್ಳಿ’ ಎನ್ನುವ ಜಾಗತೀಕರಣದ ರಭಸದಲ್ಲೂ ಪ್ರತಿಯೊಬ್ಬ ಯುವ ಭಾರತೀಯನೂ ನಮ್ಮ ದೇಶ ಇಂದಿನ ಸ್ಥಿತಿಗೆ ಹೇಗೆ ಬಂತು ಎಂದು ತಿಳಿಯಲು ಈ ಪುಸ್ತಕವನ್ನು ಓದಲೇಬೇಕೆಂದು ನನ್ನ ಅನಿಸಿಕೆ.